
23rd April 2025
ಕಲಬುರಗಿ,ಏ.೨೨.(ಕರ್ನಾಟಕ ವಾರ್ತೆ)-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಹಾಗೂ ಅರೇ ಅಲೆಮಾರಿ ಜನರ ಕಲ್ಯಾಣಕ್ಕೆ ಸರ್ಕಾರ ಹತ್ತಾರು ಯೋಜನೆ ರೂಪಿಸಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಮತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಹೇಳಿದರು.
ಬುಧವಾರ ಇಲ್ಲಿನ ಡಿ.ಸಿ ಕಚೇರಿ ಸಭಾಂಗಣದಲ್ಲಿ ಅಲೆಮಾರಿ-ಅರೇ ಅಲೆಮಾರಿ ಸಮುದಾಯದ ಜನರಿಗೆ ನಿಗಮದಿಂದ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಲೆಮಾರಿ ಸಮುದಾಯ ಯೋಜನೆಗಳ ಅನುಷ್ಠಾನ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಅನುಷ್ಠಾನ ಸಮಿತಿಗೆ ಹೊಸದಾಗಿ ಸದಸ್ಯರನ್ನು ಕೂಡಲೆ ನೇಮಿಸಬೇಕು ಎಂದರು.
ನಿಗಮದಿAದ ವಸತಿ ರಹಿತರಿಗೆ ಸಾಲ ನೀಡಲಾಗುತ್ತದೆ. ಆದರೆ ಜಿಲ್ಲೆಯಿಂದ ಇದುವರೆಗೆ ಕೇವಲ ೮ ಪ್ರಸ್ತಾವನೆ ಬಂದಿವೆ. ಹೆಚ್ಚಿನ ಪ್ರಸ್ತಾವನೆಗಳು ಕಳುಹಿಸಿದಲ್ಲಿ ನಿಗಮದಿಂದ ಅನುಮೋದನೆ ನೀಡಲಾಗುವುದು. ಇನ್ನು ಬ್ಯಾಂಕ್ ಲಿಂಕೇಜ್ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಬ್ಯಾಂಕ್ಗಳು ಅನಗತ್ಯ ಕಿರಿಕಿರಿ ಮಾಡಬಾರದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷಕುಮಾರ ಅವರಿಗೆ ಸೂಚಿಸಿದರು.
ಅಲೆಮಾರಿ ಸಮುದಾಯ ದಿನನಿತ್ಯ ಸಂಚಾರ ಮಾಡುತ್ತಾ ಊರಿಂದ ಊರಿಗೆ ಅಲೆಯುತ್ತಾರೆ. ಹೀಗಾಗಿ ಇಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸರ್ವೇ ಸಾಮಾನ್ಯ. ಹೀಗಾಗಿ ಇಂತಹ ಮಕ್ಕಳನ್ನು ಶಿಕ್ಷಕರು, ಶಿಕ್ಷಣ ಇಲಾಖೆ ಗುರುತಿಸಿ ಅವರಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಬೇಕು. ಇನ್ನು ೬ನೇ ತರಗತಿ ಪ್ರವೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧೀನದ ಕ್ರೈಸ್ ವಸತಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸಲು ಸರ್ಕಾರದ ಆದೇಶವಿದ್ದು, ಈ ಬಗ್ಗೆ ಸಮುದಾಯದ ಜನರಿಗೆ ಅರಿವು ಮೂಡಿಸಬೇಕು ಎಂದರು.
ಅಲೆಮಾರಿ ಸಮುದಾಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿದ್ದು, ಇದರ ನಿವಾರಣೆಗೆ ಜಾಗೃತಿ ಕೆಲಸ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಾಡಬೇಕು ಎಂದು ಪಲ್ಲವಿ ಜಿ. ಅಭಿಪ್ರಾಯಪಟ್ಟರು. ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಮಿಷನ್ ಸುರಕ್ಷಾ ಯೋಜನೆಯಡಿ ೪೫೦ ತರಬೇತಿದಾರರನ್ನು ಬಳಸಿಕೊಂಡು ಕಲಬುರಗಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ, ಸೇಫ್ ಟಚ್, ಅನಸೇಫ್ ಕುರಿತು ವ್ಯಾಪಕ ಪ್ರಚಾರ ಮಾಡಲಾಗಿದೆ. ಅಲೆಮಾರಿ ಸಮುದಾಯದ ಜನರು ಹೆಚ್ಚಿರುವ ಸ್ಥಳಗಳಲ್ಲಿ ಈ ಬಗ್ಗೆ ಇನ್ನು ಹೆಚ್ಚು ಪ್ರಚಾರ ಕೈಗೊಳ್ಳಿ ಎಂದರು.
ದೌರ್ಜನ್ಯ ಪ್ರಕರಣದಲ್ಲಿ ಪರಿಹಾರ ಕೂಡಲೆ ನೀಡಿ ಸಂತ್ರಸ್ತ ಕುಟುಂಬ ಸದಸ್ಯರಿಗೆ ನೌಕರಿ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ಮುತುವರ್ಜಿ ವಹಿಸಬೇಕು. ದೌರ್ಜನ್ಯ ಸಮಿತಿಗೆ ಅಲೆಮಾರಿ ಸಮುದಾಯ ಮುಖಂಡರನ್ನು ವಿಶೇಷ ಆಹ್ವಾನಿತರಾಗಿ ಕರೆಯಬೇಕು ಎಂದ ಅಧ್ಯಕ್ಷೆ ಪಲ್ಲವಿ ಜಿ. ಅವರು ಸೇಡಂ ತಾಲೂಕಿನ ಮುಧೋಳದ ಸರ್ವೆ ನಂ.೩೭ರಲ್ಲಿ ೬೦ ಬುಡ್ಗ ಜಂಗಮ ಕುಟುಂಬಗಳು ವಾಸಿಸುತ್ತಿದ್ದು, ಇವರಿಗೆ ಅಗತ್ಯ ಮೂಲಸೌಕರ್ಯ ಇಲ್ಲ. ಮೂಲಸೌಕರ್ಯ ಇಲ್ಲದೆ ಬದುಕು ಸಾಗಿಸೋದು ಹೇಗೆ ಎಂದು ಪ್ರಶ್ನಿಸಿ, ಕೂಡಲೆ ಅಗತ್ಯ ಸೌಲಭ್ಯ ಒದಗಿಸಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಮಾತನಾಡಿ ೨೦೧೧ ಜನಗಣತಿ ಪ್ರಕಾರ ೧೨,೯೩೮ ಎಸ್.ಸಿ, ೧೭,೨೫೦ ಎಸ್.ಟಿ ಹಾಗೂ ೮೩೦ ಆದಿವಾಸಿ ಅಲೆಮಾರಿ ಜನ ಜಿಲ್ಲೆಯಲ್ಲಿದ್ದಾರೆ. ಇದರಲ್ಲಿ ೫೦೧ ವಸತಿ ರಹಿತರು ಹಾಗೂ ೫೭೦ ನಿವೇಶನ ರಹಿತರಿದ್ದು, ಇವರಿಗೆ ಸೂರು ಕಲ್ಪಿಸಲು ಫಲಾನುಭವಿಗಳ ಮಾಹಿತಿ ಸಂಗ್ರಹಿಸಿದ್ದು, ಪರಿಶೀಲಿಸಿ ಹಂತ ಹಂತವಾಗಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ತಿಳಿಸಿ ನಿಗಮವ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಬಿ.ಎಸ್.ಆನಂದಕುಮಾರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ.ಮಹೇಶ ಮೇಘಣ್ಣನವರ್, ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಲಬುರಗಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಜಗದೇವಪ್ಪ, ಸೇರಿದಂತೆ ತಾಲೂಕಿನ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳು ಇದ್ದರು.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸೈಬರ್ ಅಪರಾಧಗಳ ತಡೆಗೆ ಸೂಕ್ತ ಕ್ರಮ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ ಉನ್ನತೀಕರಣ
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ